ಆಧಾರ ಕಟ್ಟಡ (ಮೇಲ್ಪಾಯ)-
	ಗೋಡೆಗಳ ಕೆಳ ತುದಿಗೂ ಭೂಮಟ್ಟಕ್ಕೂ ಮಧ್ಯೆ ಭದ್ರತೆಗಾಗಿ ಕಟ್ಟುವ ಮಂದವಾದ ಕಟ್ಟಡ (ಪ್ಲಿಂತ್), ಚಡಿಯೆಂದೂ ಹೆಸರಿದೆ. ಕೂರಲು ಅನುಕೂಲಿಸುವಂತೆ ಸ್ವಲ್ಪ ಅಗಲವಾಗಿರುವ ಚಡಿಯ ಹೆಸರು ಚಿಟ್ಟೆ. ಸಾಧಾರಣವಾಗಿ ಈ ಭಾಗವನ್ನು ಕಲ್ಲಿನಿಂದ ಕಟ್ಟುತ್ತಾರೆ. ಇದು ಪೂರ್ತ ಕಟ್ಟಡದ ಭದ್ರತೆಗೆ ಆಧಾರ. ಅಂದದ ದೃಷ್ಟಿಯಿಂದ ಆಧಾರ ಕಟ್ಟಡದ ಎತ್ತರ ಗೋಡೆಗಳ ಎತ್ತರದ ಸುಮಾರು ಆರನೆಯ ಒಂದು ಭಾಗದಷ್ಟಿರುತ್ತದೆ. ಸಾಮಾನ್ಯವಾಗಿ ಮನೆಗಳ ಒಳಭಾಗದ ನೆಲಗಟ್ಟಿನ ಮಟ್ಟ ಆಧಾರ ಕಟ್ಟಡದ ಮೇಲ್ಮಟ್ಟವಾಗಿರುತ್ತದೆ. ಈ ಮಟ್ಟದ ಹೆಸರು ಆಧಾರಮಟ್ಟ (ಪ್ಲಿಂತ್ ಲೆವಲ್). ಐದಾರು ಅಂತಸ್ತುಗಳ ಸೌಧಗಳ ಆಧಾರ ಕಟ್ಟಡದ ಎತ್ತರ ಮೇಲ್ಕಂಡ ಪ್ರಮಾಣದ ಪ್ರಕಾರ ಒಂದು ಅಂತಸ್ತಿನಷ್ಟಿರುತ್ತದೆ. ಇಂಥ ಕೆಳ ಅಂತಸ್ತಿನ ಹೆಸರು ಆಧಾರ ಅಂತಸ್ತು (ಬೇಸ್‍ಮೆಂಟ್ ಫ್ಲೋರ್). ಕೆಲವು ಸಂದರ್ಭಗಳಲ್ಲಿ ಈ ಆಧಾರ ಅಂತಸ್ತು ಕುಬ್ಜವಾಗಿ, ಮತ್ತೆ ಕೆಲವು ಸಂದರ್ಭಗಳಲ್ಲಿ ಭಾಗಶಃ ಅಥವಾ ಪೂರ್ತಿ ಭೂಮಟ್ಟಕ್ಕಿಂತ ಕೆಳಗೆ ಇರುತ್ತದೆ. ಇಂಥ ಆಧಾರ ಅಂತಸ್ತನ್ನು ಉಗ್ರಾಣ, ದಫ್ತರ ಖಾನೆ, ಗಾಡಿ ಖಾನೆ ಮುಂತಾದವುಗಳಿಗಾಗಿ ರಚಿಸುತ್ತಾರೆ.
(ಕೆ.ಎಸ್.ಕೆ.)
(ಪರಿಷ್ಕರಣೆ: ಎಂ. ಜಿ. ಶ್ರೀನಿವಾಸನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ